ಭಟ್ಟೋಜಿ ದೀಕ್ಷಿತ:-
	(ಕ್ರಿ.ಶ.೧೬೩೦). ಸಿದ್ಧಾಂತ ಕೌಮುದಿಯ ಕರ್ತೃ. ಮಹಾರಾಷ್ಟ್ರ ದೇಶಸ್ಥ ಬ್ರಾಹ್ಮಣ. ಪ್ರಸಿದ್ಧ ವಿದ್ವಾಂಸಕರ ವಂಶದಲ್ಲಿ ಹುಟ್ಟಿದವ. ತಂದೆ ಲಕ್ಷ್ಮೀಧರ. ಸೋದರ ರಂಗೋಜಿ ದೀಕ್ಷಿತ. ಮಗ ಭಾನುಜ ದೀಕ್ಷಿತ. ಈತ ಅನೇಕ ಶಿಷ್ಯರಿಗೆ ವ್ಯಾಕರಣ ಮತ್ತು ವೇದಾಂತ ಬೋಧಿಸುತ್ತಿದ್ದ. ಈತನ ಶಿಷ್ಯರಲ್ಲಿ ಖ್ಯಾತನಾದವ ನಾಗೇಶ ಭಟ್ಟ.

	ಷಹಜಹಾನನ ಆಸ್ಥಾನ ಕವಿಯಾಗಿದ್ದ ಜಗನ್ನಾಥ ಪಂಡಿತ ತಿಳಿಸಿರುವಂತೆ ಭಟ್ಟೋಜಿ ದೀಕ್ಷಿತ ಪ್ರಕ್ರಿಯಾ ಪ್ರಕಾಶದ ಕರ್ತೃವಾದ ಶೇಷಕೃಷ್ಣನ ಶಿಷ್ಯ. 1650ರಲ್ಲಿದ್ದ ಜಗನ್ನಾಥ ಶೇಷಕೃಷ್ಣನ ಮಗ ವೀರೇಶ್ವರನ ಶಿಷ್ಯ. ಆದ್ದರಿಂದ ಶೇಷಕೃಷ್ಣನ ಶಿಷ್ಯನಾದ ಭಟ್ಟೋಜಿ ದೀಕ್ಷಿತ ಜಗನ್ನಾಥನಿಗೆ ಕೊಂಚ ಹಿಂದೆ ಅಂದರೆ ಸುಮಾರು 1630ರಲ್ಲಿ ಇದ್ದಿರಬೇಕು. 

	ಈತನ ಗ್ರಂಥಗಳಲ್ಲಿ ಸುಪ್ರಸಿದ್ದವಾದುದು ಸಿದ್ಧಾಂತ ಕೌಮುದಿ. ಇದು ಪಾಣಿನಿಯ ಅಷ್ಟಾಧ್ಯಾಯೀ ಸೂತ್ರಗಳ ವ್ಯಾಖ್ಯಾನ. ಇದಕ್ಕೆ ಅನೇಕ ಪ್ರಾಚೀನ ನವೀನ ವ್ಯಾಖ್ಯಾನಗಳೂ ವಿತರಣಗಳೂ ರಚಿತವಾಗಿದೆ. ಪಾಣಿನಿಯ ವ್ಯಾಕರಣ ಶಾಸ್ತ್ರ ತಿಳಿಯಲು ಇದು ಉಪಯುಕ್ತ ಗ್ರಂಥ. ಇದಕ್ಕೆ ವ್ಯಾಖ್ಯಾನ ರೂಪವಾಗಿ ದೀಕ್ಷಿತನೇ ಗುರುಗಳ ಉಪದೇಶ ಕ್ರಮಾನುಗುಣವಾಗಿ ಪ್ರೌಢ ಮನೋರಮ ಎಂಬ ಗ್ರಂಥ ಬರೆದ. ಸಿದ್ಧಾಂತ ಕೌಮುದಿಯಲ್ಲಿ ಭಾಷೋಪಯುಕ್ತ ಸಂಜ್ಞೆಗಳನ್ನೂ ಪರಿಭಾಷೆಗಳನ್ನೂ ಸಂಧಿ ಸಮಾಸ ಕೃದಂತ ತದ್ಧಿತಾಂತ ರೂಪಗಳನ್ನೂ ವೈದಿಕ ಪ್ರಕ್ರಿಯೆಯಿಂದ ಪ್ರತ್ಯೇಕಿಸಿ ವಿವರಿಸಲಾಗಿದೆ.

	ಅಲ್ಲದೆ ಈತ ಪಾಣಿನಿಯ ಅಷ್ಟಾಧ್ಯಾಯಿಗೆ ಅಲ್ಲಿಯ ಸೂತ್ರಗಳ ಕ್ರಮದಲ್ಲಿಯೇ ಶಬ್ದ ಕೌಸ್ತುಭವೆಂಬ ವಿಸ್ತಾರ ವ್ಯಾಖ್ಯಾನ ಬರೆದಿದ್ದಾನೆ. ಸಿದ್ಧಾಂತ ಕೌಮುದಿ ಪ್ರಯೋಗ ಕ್ರಮವನ್ನು ಅನುಸರಿಸಿದ ಸೂತ್ರ ವಿವರಣೆಯಾದರೆ, ಶಬ್ದಕೌಸ್ತುಭ ಅಷ್ಟಾಧ್ಯಾಯೀ ಸೂತ್ರಾನುಕ್ರಮಣಿಕೆಗೆ ಅನುಸಾರವಾದ ವಿವರಣೆಯಾಗಿದೆ. ಆದರೆ ಇದು ಪೂರ್ಣವಾಗದೆ ಉಳಿದಿದೆ. ನಾಲ್ಕು ಅಧ್ಯಾಯಗಳಷ್ಟು ಮಾತ್ರ ಈಗ ದೊರೆತಿದೆ. ಇದಲ್ಲದೆ ಲಿಂಗಾನುಶಾಸನಕ್ಕೆ ವ್ಯಾಖ್ಯಾನರೂಪವಾದ ಚಿಕ್ಕ ಗ್ರಂಥವನ್ನು ಬರೆದಿದ್ದಾನೆ.
(ಟಿ.ಜಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ